ಆಡಳಿತಸ್ಥಾನಗಳ ಆರಕ್ಷಣ
	ಹಿಂದುಳಿದ ಜನಾಂಗಗಳ ಏಳಿಗೆಗಾಗಿ ಭಾರತ ಸರ್ಕಾರ ಕೈಗೊಂಡಿರುವ ಯೋಜನೆಗಳಲ್ಲಿ ಇದೂ ಒಂದು. ಈಚಿನ ಜನಗಣತಿಯಂತೆ ಭಾರತದಲ್ಲಿರುವ ಅನುಸೂಚಿತ ಜಾತಿಯ ಜನಸಂಖ್ಯೆ 64,511,313. ಅನುಸೂಚಿತ ಪಂಗಡಗಳ ಜನಸಂಖ್ಯೆ 29,803,470. ಇವರು ಆರ್ಥಿಕವಾಗಿ, ಸಾಮಾಜಿಕವಾಗಿ ಬಹು ಹಿಂದುಳಿದ ಜನ. ವಿದ್ಯಾಭ್ಯಾಸದಲ್ಲಾಗಲಿ, ನೌಕರಿ, ಉದ್ಯೋಗಗಳನ್ನು ಪಡೆಯುವುದರಲ್ಲಾಗಲಿ ಇವರು ಇತರರಷ್ಟು ಮುಂದುವರಿದವರಲ್ಲ. ಸಾಮಾನ್ಯವಾಗಿ ಜಾಣನಿಗೆ ಮಾತ್ರ ವಿದ್ಯಾಭ್ಯಾಸದ ಅವಕಾಶವಿರಬೇಕು. ಯೋಗ್ಯತೆ ಉಳ್ಳವನಿಗೆ ಮಾತ್ರ ಉದ್ಯೋಗಾವಕಾಶಗಳಿರಬೇಕು ಎಂಬ ನಿಯಮವನ್ನು ಒಪ್ಪಬಹುದಾದರೂ (ನೋಡಿ- ಅವಕಾಶಸಮಾನತೆ,-ಶಿಕ್ಷಣದಲ್ಲಿ) ಕಾರಣಾಂತರದಿಂದ ಅಷ್ಟು ಜಾಣರಲ್ಲದ ಅನುಸೂಚಿತ ವರ್ಗದವರಿಗೂ ಶಿಕ್ಷಣಕ್ಷೇತ್ರದಲ್ಲಿ ಅವಕಾಶ ಇರಬೇಕಾದದ್ದು ಅಗತ್ಯ. ಇದಕ್ಕಾಗಿ ರಾಜ್ಯ ಸರ್ಕಾರಗಳೂ ಕೇಂದ್ರಸರ್ಕಾರವೂ ಕಾಯಿದೆ ಮಾಡಿ ಜಾಗಗಳನ್ನು ಕಾಯ್ದಿಡುತ್ತವೆ. ಹೀಗೆಯೇ ಆಡಳಿತಸ್ಥಾನಗಳನ್ನೂ ಅನುಸೂಚಿತ ಜಾತಿಗಳಿಗಾಗಿ ಕಾಯ್ದಿಡಲಾಗಿದೆ. ಅಖಿಲಭಾರತ ಮಟ್ಟದಲ್ಲಿ ಒಟ್ಟಾರೆ ನಡೆಯುವ ಆಯ್ಕೆಯಲ್ಲಿ 121/2% ಸ್ಥಳಗಳನ್ನು ಇತರೆಯಾಗಿ 16% ಸ್ಥಳಗಳನ್ನು ಅನುಸೂಚಿತ ಜಾತಿಗಳಿಗಾಗಿಯೂ, ಎರಡೂ ಕಡೆ 5% ಸ್ಥಳಗಳನ್ನು ಅನುಸೂಚಿತ ಪಂಗಡಗಳಿಗೂ ಕಾಯ್ದಿಡಲಾಗಿದೆ. ಇದರ ಜೊತೆಗೆ ವಯಸ್ಸು, ಯೋಗ್ಯತೆಗಳ ವಿಚಾರದಲ್ಲೂ ಈ ಜನಕ್ಕೆ ರಿಯಾಯಿತಿ ಉಂಟು. 						  
  (ಕೆ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ